ಅನ್ಯೋಕ್ತಿ ರೂಪಕಗಳು

ಒಂದು ವಿಷಯವನ್ನು ಸ್ಪಷ್ಟಪಡಿಸಲು ಅದೇ ರೀತಿಯ ಬೇರೊಂದು ವಿಷಯವನ್ನು ಬಳಸಿಕೊಂಡು ರಚಿಸಿರುವ ರೂಪಕ (ಅಲೆಗಾರಿಕಲ್ ಪ್ಲೇಸ್). (ನೋಡಿ- ಅನ್ಯೋಕ್ತಿ) ಅನ್ಯೋಕ್ತಿಯ ಇತರ ಹೆಸರುಗಳಾದ ಅನ್ಯಾರ್ಥ, ವ್ಯಾಜೋಕ್ತಿ, ಅಥಾಂತರೋಕ್ತಿ, ರೂಪಕಥೆ, ರಹಸ್ಯಾರ್ಥ,ಗೂಢಾರ್ಥದ್ಯೋತಕ ಎಂಬ ಮಾತುಗಳನ್ನು ನೋಡಿದರೆ ಅದರ ಅರ್ಥ ಸ್ಪಷ್ಟವಾಗುತ್ತದೆ. ಸಂಸ್ಕøತಸಾಹಿತ್ಯದಲ್ಲಿ ಇದು ಹೊಸದೇನೂ ಅಲ್ಲ. ಉಪನಿಷತ್ತುಗಳ ಕಾಲದಿಂದಲೂ ಇದು ನಡೆದುಬಂದಿದೆ. ಕೃಷ್ಣಯಜುರ್ವೇದ, ಬೃಹದಾರಣ್ಯಕೋಪನಿಷತ್ತು ಮೊದಲಾದುವುಗಳಲ್ಲಿ ಇಂಥ ವಿಷಯವನ್ನು ನೋಡಬಹುದು. ಪ್ರಬೋಧ ಚಂದ್ರೋದಯ ನಾಟಕಕಾರನಾದ ಕೃಷ್ಣಮಿಶ್ರನೇ ಈ ತೆರನಾದ ಧಾರ್ಮಿಕ ಅನ್ಯೋಕ್ತಿ ನಾಟಕಕ್ಕೆ, ಸಂಸ್ಕøತಸಾಹಿತ್ಯದಲ್ಲಿ ಮೊದಲಿಗನೆಂಬ ತಿವಳಿಕೆಯಿತ್ತು. ಆದರೆ ಮಧ್ಯ ಏಷ್ಯದ ಟುರ್ಫಾನ್ ಎಂಬಲ್ಲಿ ಭಾಗಶಃ ದೊರೆತ ಮೂರು ರೂಪಕಗಳಲ್ಲಿ ಒಂದು ಕೃಷ್ಣಮಿಶ್ರನ ಪ್ರಬೋಧಚಂದ್ರೋದಯವನ್ನು ಹೋಲುತ್ತದೆಂದು ವಿದ್ವಾಂಸರ ಅಭಿಪ್ರಾಯ. ಆದುದರಿಂದ ಕೃಷ್ಣಮಿಶ್ರನಿಗೂ ಇಂಥ ಧಾರ್ಮಿಕ ಅನ್ಯೋಕ್ತಿ ನಾಟಕಗಳನ್ನು ಬರೆಯಲು ಒಂದು ಮಾರ್ಗದರ್ಶನ ದೊರೆತಿರಬಹುದೆಂದು ಊಹಿಸಬಹುದು. ಅಶ್ವಘೋಷನೂ ಇಂಥ ಒಂದು ನಾಟಕವನ್ನು ಬರೆದಿದ್ದನೆಂದು ಈಗ ಗೊತ್ತಾಗಿದೆ. ಅಲ್ಲಿಂದ ಅಲ್ಲೊಂದು ಇಲ್ಲೊಂದು ಕೃತಿ ಕಾಣಿಸಿಕೊಂಡು ಕೃಷ್ಣಮಿಶ್ರನ ಕಾಲಕ್ಕೆ ಈ ಪ್ರಕಾರ ಮತ್ತೆ ಬೆಳೆದಿರಬಹುದು. ಕೃಷ್ಣಮಿಶ್ರ 11ನೆಯ ಶತಮಾನದವನಿರಬಹುದು. ಏಕೆಂದರೆ 1040-1070ರವರೆಗೆ ಆಳಿದ ಗಂಗದೇವನ ಮಗನಾದ ಚೇದಿರಾಜ ಕರ್ಣದೇವ ಕೀರ್ತಿವರ್ಮನನ್ನು ಸೋಲಿಸಲು, ಅವನನ್ನು ಗೋಪಾಲರು ಜಯಿಸಿ ಕೀರ್ತಿವರ್ಮನ್ನನು ಅವನ ರಾಜ್ಯದಲ್ಲಿ ಪ್ರತಿಷ್ಠಾಪಿಸಿದಂತೆಯೂ ಆ ರಣಕೋಲಾಹಲ ಮುಗಿದಮೇಲೆ ಶಾಂತರಸಪ್ರಧಾನವಾದ ಪ್ರಬೋಧಚಂದ್ರೋದಯ ಕೀರ್ತಿವರ್ಮನ ಮುಂದೆ ಅಭಿನಯಿಸಲ್ಪಟ್ಟಂತೆ ಈ ನಾಟಕದ ಪ್ರಸ್ತಾವನೆಯಿಂದ ತಿಳಿದುಬಂದಿದೆ. ಕೃಷ್ಣಮಿಶ್ರ ಒಬ್ಬ ಯತಿ. ಅದ್ವೈತಮತ ಪ್ರಸಾರಕನೆಂದು ಅವನ ನಾಟಕದಿಂದ ತಿಳಿದುಬರುವುದು. ವೇದಾಂತ ಪ್ರವೃತ್ತಿಯಿಲ್ಲದ ಕಾವ್ಯಪ್ರಿಯನಾದ ಶಿಷ್ಯನಿಗೆ ವೇದಾಂತ ಬೋಧನೆಗೋಸುಗ ಈ ನಾಟಕವನ್ನು ರಚಿಸಿದನೆಂಬ ಹೇಳಿಕೆ ಇದೆ.ಆರು ಅಂಕಗಳನ್ನುಳ್ಳ ಈ ನಾಟಕ ಒಂದು ಬಗೆಯ ಜೀವನ ಹೋರಾಟದ ಚಿತ್ರಣ; ಇಂದ್ರಿಯವ್ಯಪಾರಗಳ ತುಮುಲಸಂಗ್ರಾಮಕ್ಕೊಂದು ನಿದರ್ಶನ. ಕಾಮಕ್ರೋಧಾದಿ ಷಡ್‍ರಿಪುಗಳ ಉದ್ಧಟತನ ಒಂದು ಕಡೆಗಾದರೆ ತದ್ವಿರುದ್ಧವಾಗಿ ಪ್ರಬೋಧ, ವಿವೇಕ, ಪುರುಷ, ಉಪನಿಷದ್ದೇವಿ ಮೊದಲಾದ ಉದಾತ್ತಪಾತ್ರಗಳ ಹೋರಾಟ ಇನ್ನೊಂದುಕಡೆ, ಈ ಹೋರಾಟದ ಕೊನೆಯಲ್ಲಿ ತತ್ತ್ವದರ್ಶನ ಸ್ಫುರಿಸುವಂತೆ ಕಥೆ ಕಟ್ಟಲಾಗಿದೆ. ಜೀವನದ ಹೋರಾಟದಲ್ಲಿ ಎದೆಗುಂದಿ ಬಗೆಗಾಣದ ಮಾನವನಿಗೆ ಪರಾತ್ಪರಧ್ಯೇಯವನ್ನು ನಿರೂಪಿಸಿ ಜೀವೇಶ್ವರೈಕ್ಯವನ್ನು ಬೋಧಿಸುಲೋಸುಗ ಈ ನಾಟಕವನ್ನು ರಚಿಸಲಾಗಿದೆ. ಪಾತ್ರರಚನಾ ಚಾತುರ್ಯ ಕಾವ್ಯಸ್ವಾರಸ್ಯ ಸಮರ್ಪಕವಾಗಿವೆ. ಕಥಾವಸ್ತು ಸಂವಿಧಾನಕೌಶಲದಿಂದ ಕೂಡಿದೆ. ಕಾಮಕ್ರೋಧಾದಿ ಮಾನವಜನ್ಯಗುಣಗಳು ನಿರಾಕಾರವಾಗಿದ್ದರೂ ರಂಗಭೂಮಿಯ ಮೇಲೆ ಪಾತ್ರಗಳಾಗಿ ಬರುವುದರಿಂದ ನಾಟಕ ಪರಿಣಾಮಕಾರಿಯಾಗುತ್ತದೆ. ಸ್ವಲ್ಪದರಲ್ಲಿ ರಸಮಯವಾಗಿ, ಸುಸ್ಪಷ್ಟವಾಗಿ ಮನನೀಯ ತತ್ತ್ವೋಪದೇಶವನ್ನು ನಿರೂಪಿಸುವಲ್ಲಿ ಕೃಷ್ಣಮಿಶ್ರ ಅಪ್ರತಿಮನಾಗಿದ್ದಾನೆ. ಸ್ಪೇನಿನ ಕಾಲ್ಡೆರಾನ್ ತನ್ನ ಅನ್ಯೋಕ್ತಿರೂಪಕಗಳಿಂದ ಕೆಥೊಲಿಕ್ ಮತವನ್ನು ಎತ್ತಿ ಹಿಡಿದಂತೆ ಕೃಷ್ಣಮಿಶ್ರ ತನ್ನ ಕೃತಿಯಲ್ಲಿ ವೈಷ್ಣವತತ್ತ್ವವನ್ನು ಪರಿಣಾಮಕಾರಿಯಾಗಿ ಸಿದ್ಧಾಂತ ಮಾಡಿದ್ದಾನೆ. ಕೃಷ್ಣಮಿಶ್ರನ ಸರಣಿಯನ್ನು ಅನುಸರಿಸಿ ಅನುಮಿತಿ ಪರಿಣಯ, ಅರ್ಮತೋದಯ, ಆನಂದಚಂದ್ರೋದಯ ಮುಂತಾದ 36 ಧಾರ್ಮಿಕ ನಾಟಕಗಳು ರಚಿಸಲ್ಪಟ್ಟಿವೆಯೆಂದು ಇತಿಹಾಸಕಾರರು ತಿಳಿಸುತ್ತಾರೆ. ಕೃಷ್ಣಮಿಶ್ರನ ಕೃತಿಗೆ ಹೋಲಿಸಿದಾಗ ಇವು ತೀರ ನೀರಸ, ವಿಸ್ತøತಗಳಾಗಿ ಕಾಣುತ್ತವೆ.					
(ಎ.ಎಲ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ